ಆಂಪೇರ್
ವಿದ್ಯುತ್‍ಪ್ರವಾಹದ ಎಸ್‍ಐ ಏಕಮಾನ. ಒಂದು ವಾಹಕದಲ್ಲಿ ವಿದ್ಯುತ್ ಋಣ ಕಣಗಳ (ಎಲೆಕ್ಟ್ರಾನ್ಸ್) ಚಲನೆಯೇ ವಿದ್ಯುತ್‍ಪ್ರವಾಹ. ಇಂಥ ಒಂದು ವಾಹಕದ ಯಾವುದೊಂದು ಭಾಗದಿಂದ 6.3 x 1018 ವಿದ್ಯುತ್ ಋಣ ಕಣಗಳು ಒಂದು ಸೆಕೆಂಡಿನಲ್ಲಿ ನಿಷ್ಕ್ರಮಿಸಿದರೆ, ಆಗ ಒಂದು ಅಂಪೇರ್ ಪ್ರವಾಹ ಹರಿಯುತ್ತದೆ ಎಂದು ಹೇಳುತ್ತೇವೆ. ಆಂಪೇರ್ ನಲ್ಲಿ ಶುದ್ಧ ಆಂಪೇರ್ (ಆ್ಯಬ್ಸೊಲ್ಯೂಟ್) ಮತ್ತು ಅಂತರರಾಷ್ಟ್ರೀಯ ಆಂಪೇರ್ ಎಂದು ಎರಡು ವಿಧಗಳಿವೆ. ಶುದ್ಧ ಆಂಪೇರನ್ನು ಸರಿಯಾಗಿ ಅಳೆಯುವುದು ಕಷ್ಟವಾದುದರಿಂದ, ಅಂತಾರಾಷ್ಟ್ರೀಯ ಆಂಪೇರನ್ನು ಬಳಕೆಗೆ ತರಲಾಯಿತು.

ಅಂತಾರಾಷ್ಟ್ರೀಯ ಆಂಪೇರ್= 0.99985 ಶುದ್ಧ ಆಂಪೇರ್, ಒಂದು ಅಂತರರಾಷ್ಟ್ರೀಯ ಆಂಪೇರನ್ನು ಹೀಗೆ ವಿವರಿಸಬಹುದು; ಯಾವುದೊಂದು ಬದಲಾಗದ ವಿದ್ಯುತ್‍ಪ್ರವಾಹ ಸಿಲ್ವರ್ ನೈಟ್ರೇಟ್ ದ್ರಾವಣದ ಮೂಲಕ ಹರಿದಾಗ, ಬೆಳ್ಳಿ 0.00118 ಗ್ರಾಂ. ಸೆಕೆಂಡ್‍ನಂತೆ ಸೇರಿಕೆಯಾದರೆ ಆ ಪ್ರವಾಹ ಒಂದು ಅಂತರರಾಷ್ಟ್ರೀಯ ಆಂಪೇರ್. ಶುದ್ಧ ಆಂಪೇರನ್ನು ಅಳೆಯಲು ಬಲವನ್ನು ಅಳೆಯಬೇಕಾಗುವುದು. ಅದನ್ನು ಎರಡು ವಿಧದಲ್ಲಿ ಅಳೆಯಬಹುದು. 1 ಒಂದು ವಿದ್ಯುತ್-ಸುರಳಿಯ (ಸಾಲೆನಾಯ್ಡ್) ಮೂಲಕ ಹರಿಯುವ ಪ್ರವಾಹ ತೂಗು ಹಾಕಿದ ಆಯಸ್ಕಾಂತದ ಸೂಜಿಯ ಮೇಲೆ ಬೀರುವ ಬಲದಿಂದ. 2 ಮಂಡಲದ (ಸಕ್ರ್ಯೂಟಿನ) ಇನ್ನೊಂದು ಭಾಗದ ಮೇಲೆ ಬೀರುವ ಬಲದಿಂದ. 1946ರಿಂದ ಅಂತಾರಾಷ್ಟ್ರೀಯ ಏಕಮಾನದ ವ್ಯಾಖ್ಯೆ ಹೀಗಿದೆ: ಅನಂತ ಉದ್ದ ಮತ್ತು ನಿರ್ಲಕ್ಷಿಸಬಹುದಾದ ಅಡ್ಡಕೊಯ್ತವಿರುವ ಎರಡು ವಾಹಕಗಳನ್ನು ನಿರ್ವಾತದಲ್ಲಿ ಸಮಾಂತರವಾಗಿ 1 ಮೀ ಅಂತರದಲ್ಲಿಟ್ಟು ಇವುಗಳ ಮೂಲಕ ಹರಿಯಬಿಟ್ಟ ಪ್ರವಾಹ ಆ ವಾಹಕಗಳ ನಡುವೆ ಉತ್ಪಾದಿಸುವ ಬಲ ಮೀಟರ್ ಉದ್ದಕ್ಕೆ 2x10-7 ನ್ಯೂಟನ್ ಆಗಿದ್ದರೆ ಆ ಪ್ರವಾಹಕ್ಕೆ 1 ಆಂಪೇರ್ ಎಂದು ಹೆಸರು. ಫ್ರೆಂಚ್ ಭೌತವಿಜ್ಞಾನಿ ಆಂದ್ರೆ ಮಾರಿ ಆಂಪೇರ್ (1775-1836) ಗೌರವಾರ್ಥ ಇದಕ್ಕೆ ಈ ಹೆಸರು.

ವಿದ್ಯುತ್‍ಪ್ರವಾಹಗಳನ್ನು ಅಳೆಯುವ ಉಪಕರಣದ ಹೆಸರು ಆಂಪೇರ್‍ಮಾಪಕ ಅಥವಾ ಆ್ಯಮ್ಮೀಟರ್.
 
(ಎಮ್.ಎಚ್.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ